ಬ್ರಿಜ್‍ಮನ್, ಪರ್ಸಿವಿಲಿಯಮ್ಸ್
	1882-1961 ಅಮೆರಿಕನ್ ಭೌತ ವಿಜ್ಞಾನಿ. ಜನನ 21-4-1882 ಕೇಂಬ್ರಿಜ್, ಮಸಾಚುಸೆಟ್ಸ್: ಮರಣ 20-8-1961 ರ್ಯಾಂಡೊಲ್ಛ್, ನ್ಯೂ ಹ್ಯಾಂಪ್‍ಶೈರ್. ಕೃತವಾಗಿ ಅಧಿಕ ಮತ್ತು ಅತ್ಯಧಿಕ ಸಂಮರ್ದ ಸನ್ನಿವೇಶಗಳ ಸೃಷ್ಟಿ ಅಧ್ಯಯನ ಇವನ ಆಸಕ್ತ ವಿಷಯಗಳು. ಸಹಜವಾಗಿ ಇವನ ಗಮನ ಸಂಮರ್ದಧಾರಕಗಳ ರಚನೆ ಮತ್ತು ಅವನ್ನು ತಯಾರಿಸಲು ಬಳಸುವ ಪದಾರ್ಥಗಳತ್ತ ಹರಿಯಿತು. ಯಾವುದೇ ಧಾರಕದಲ್ಲಿಯ ಸಂಧಿ ಸ್ಥಾನಗಳು ಅಧಿಕ ಸಂಮರ್ದದ ಹತಿ ತಡೆಯಲಾಗದೆ ಎಡೆ ಬಿಟ್ಟುಕೊಟ್ಟಾಗ ಅದು ಒಡೆದು ಹೋಗುತ್ತಿತ್ತು. ಏರು ಸಂಮರ್ದದೊಂದಿಗೆ ಸಡಿಲವಾಗುವ ಬದಲು, ಇನ್ನಷ್ಟು ಬಿಗಿಗೊಳ್ಳುವ ಸಂಧಿಸ್ಥಾನಗಳನ್ನು ತಯಾರಿಸಿದ್ದಾರೆ, ಧಾರಕವನ್ನು ನಿರ್ಮಿಸಲು ಬಳಸುವ ಪದಾರ್ಥವನ್ನು ಹೊಂದಿ, ತಾತ್ತ್ವಿಕವಾಗಿ, ಯಾವ ಮಟ್ಟದ ಸಂಮರ್ದದ ಸೃಷ್ಟಿಯೂ ಸಾಧ್ಯವಾಗಬೇಕು. ಹೀಗೆ ತರ್ಕಿಸಿದ ಬ್ರಿಜ್‍ಮನ್ ಸಂಧಿಗಳಲ್ಲಿ ಸಂಮರ್ದದೊಂದಿಗೆ ಬಿಗಿಯಾಗುವ ಮೊಹರುಗಳ ರಚನೆಗೆ ಕೈ ಹಾಕಿ 20,000 ವಾಯುಮಂಡಲ ಸಂಮರ್ದವನ್ನು (ಅಥವಾ ಚಸೆಂಮೀಗೆ 20 ಮೆಟ್ರಿಕ್ ಟನ್) ಹಿಡಿದಿಡುವ ಧಾರಕದ ರಚನೆ ಸಾಧಿಸಿದ. ಅಧಿಕ ಸಾಮಥ್ರ್ಯದ ಪದಾರ್ಥಗಳನ್ನು ಬಳಸುತ್ತ ಹಾಗೂ ಧಾರಕಕ್ಕೆ ಹೊರಗಿನಿಂದ ಒತ್ತಡ ಹೇರುತ್ತ ಇನ್ನೂ ಅಧಿಕಾಧಿಕ ಸಂಮರ್ದವನ್ನು ಹಿಡಿದಿಡುವ ತಂತ್ರ ಅವನಿಗೆ ಕೈ ಗೂಡಿತು. ಅಧಿಕಾಧಿಕ ಸಂಮರ್ದದಲ್ಲಿ ವಸ್ತುವಿನ ವರ್ತನೆಯ ಮೇಲೆ ಹೊಸ ಬೆಳಕು ಬಿದ್ದು ಭೂಗರ್ಭದಲ್ಲಿಯ ಸ್ಥಿತಿಗತಿಗಳ ಬಗ್ಗೆ ಇಣುಕುನೋಟ ಲಭಿಸಿತು. ಉನ್ನತ ಸಂಮರ್ದ ಹಾಗೂ ಉಚ್ಚ ಉಷ್ಣತೆಗಳ ಬಳಕೆಯಿಂದ ಸಂಶ್ಲೇಷಿತ ಅಥವಾ ಕೃತಕ ವಜ್ರದ ತಯಾರಿಕೆ ಸಾಧ್ಯವಾಯಿತು (1955). 1946ರ ಭೌತವಿಜ್ಞಾನ ವಿಭಾಗದ ನೊಬೆಲ್ ಪಾರಿತೋಷಿಕ ಇವನಿಗೆ ದೊರೆಯಿತು. ಬದುಕಿನ ಯಶಸ್ಸಾಗಲಿ ವಿಜ್ಞಾನ ರಂಗದಲ್ಲಿಯ ಸಿದ್ಧಿಗಳಾಗಲಿ ಇವನ ಮಾನಸಿಕ ಮ್ಲಾನತೆಯನ್ನು ನಿವಾರಿಸಲು ಶಕ್ತವಾಗಲಿಲ್ಲ. ಚಿಕಿತ್ಸಿಸಲಾಗದ ವ್ಯಾಧಿಜರ್ಜುರಿತನಾದ ಬ್ರಿಜ್‍ಮನ್ ಆತ್ಮಹತ್ಯೆಗೆ ಈಡಾಗಿ ಬದುಕನ್ನು ಕೊನೆಗಾಣಿಸಿಕೊಂಡ. 		(ಎಸ್.ವಿ.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ